Skip to main content
ಸಿಂಧೂರ ಭಾರತ
News

ಗುಣಮಟ್ಟದ ಬೀಜ–ವೈಜ್ಞಾನಿಕ ಬಿತ್ತನೆ ಕುರಿತು ಮೇ 26ರಂದು ಕೃಷಿ ಮೇಳ

23 May 2026

ಬಳ್ಳಾರಿ: ರೈತರಿಗೆ ಗುಣಮಟ್ಟದ ಬೀಜಗಳ ಆಯ್ಕೆ, ವೈಜ್ಞಾನಿಕ ಬಿತ್ತನೆ ವಿಧಾನಗಳು ಹಾಗೂ ಆಧುನಿಕ ಕೃಷಿ ತಂತ್ರಜ್ಞಾನಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಬಿಡಿಸಿಸಿಐ) ನೇತೃತ್ವದಲ್ಲಿ ಮೇ 26ರಂದು ಎಪಿಎಂಸಿ ಆವರಣದಲ್ಲಿ ‘ಕೃಷಿ ಮೇಳ’ ಆಯೋಜಿಸಲಾಗಿದೆ.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ನೀರಾವರಿ ಮತ್ತು ಪಶು ಸಂಗೋಪನಾ ಇಲಾಖೆಗಳ ಸಹಯೋಗದಲ್ಲಿ ಈ ಮೇಳ ನಡೆಯಲಿದೆ. ಜೊತೆಗೆ ಬಳ್ಳಾರಿ ಜಿಲ್ಲಾ ಕಾಟನ್ ಅಸೋಸಿಯೇಷನ್, ಕರ್ನಾಟಕ ರಾಜ್ಯ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾ ಘಟಕ, ಎಪಿಎಂಸಿ ವರ್ತಕರ ಸಂಘ, ದಲ್ಲಾಲಿ ವರ್ತಕರ ಸಂಘ ಮತ್ತು ವಿವಿಧ ರೈತ ಸಮೂಹಗಳು ಸಹಕಾರ ನೀಡಿವೆ.


ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಿಡಿಸಿಸಿಐ ಅಧ್ಯಕ್ಷ ಅವ್ವಾರು ಮಂಜುನಾಥ್ ಹಾಗೂ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು, “ಮೇಳವು ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿದ್ದು, ರೈತರಿಗೆ ಕೃಷಿ ಕ್ಷೇತ್ರದ ತಜ್ಞರಿಂದ ನೇರ ಮಾಹಿತಿ ದೊರೆಯಲಿದೆ. ಹವಾಮಾನ ಬದಲಾವಣೆ, ಮಣ್ಣಿನ ಗುಣಮಟ್ಟ, ಉತ್ತಮ ಉತ್ಪಾದನೆಗಾಗಿ ಅಗತ್ಯವಿರುವ ಬಿತ್ತನೆ ವಿಧಾನಗಳು, ಗುಣಮಟ್ಟದ ಬೀಜ ಬಳಕೆ ಹಾಗೂ ಬೆಳೆ ನಿರ್ವಹಣೆ ಕುರಿತು ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ” ಎಂದು ತಿಳಿಸಿದರು.


ರಾಜ್ಯದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮೇಳವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಹಾಗೂ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಹನುಮಂತಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.


ಕೃಷಿ ವಿಜ್ಞಾನಿಗಳಿಂದ ವಿಶೇಷ ಉಪನ್ಯಾಸ


ಮೇಳದಲ್ಲಿ ಕೃಷಿ ವಿಜ್ಞಾನಿಗಳಾದ ಡಾ. ಎ.ಜಿ. ಶ್ರೀನಿವಾಸ್, ಡಾ. ರವಿಶಂಕರ್ ಜಿ., ಡಾ. ಪಾಲಯ್ಯ ಹಾಗೂ ಡಾ. ಎಂ. ಭೀಮಣ್ಣ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳ ವೈಜ್ಞಾನಿಕ ಬಿತ್ತನೆ ವಿಧಾನ, ಕೀಟ ಮತ್ತು ರೋಗ ನಿಯಂತ್ರಣ, ಮಣ್ಣಿನ ಆರೋಗ್ಯ ಕಾಪಾಡುವ ಕ್ರಮಗಳು, ನೀರಿನ ಸಮರ್ಪಕ ಬಳಕೆ ಹಾಗೂ ಉತ್ಪಾದನಾ ವೆಚ್ಚ ಕಡಿಮೆ ಮಾಡುವ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಲಿದ್ದಾರೆ.


ರೈತರಿಗೆ ನೇರ ಸಂವಾದದ ಅವಕಾಶವೂ ಕಲ್ಪಿಸಲಾಗಿದ್ದು, ಕೃಷಿಗೆ ಸಂಬಂಧಿಸಿದ ವಿವಿಧ ಇಲಾಖೆಗಳ ತಜ್ಞರು ರೈತರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಕೃಷಿ ಪರಿಕರಗಳು, ಗುಣಮಟ್ಟದ ಬೀಜಗಳು, ರಸಗೊಬ್ಬರಗಳು ಮತ್ತು ಆಧುನಿಕ ಕೃಷಿ ಸಾಧನಗಳ ಪ್ರದರ್ಶನವೂ ಮೇಳದಲ್ಲಿ ಇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.


ಜನಪ್ರತಿನಿಧಿಗಳು, ಅಧಿಕಾರಿಗಳ ಭಾಗಿ


ಕಾರ್ಯಕ್ರಮದಲ್ಲಿ ಮೇಯರ್ ಪಿ. ಗಾದೆಪ್ಪ, ಶಾಸಕರಾದ ಬಿ. ನಾಗೇಂದ್ರ, ನಾರಾ ಭರತರೆಡ್ಡಿ, ಜೆ.ಎನ್. ಗಣೇಶ್, ಬಿ.ಎಂ. ನಾಗರಾಜ್, ಈ. ಅನ್ನಪೂರ್ಣ ತುಕಾರಾಂ, ವೈ.ಎಂ. ಸತೀಶ್, ಸಂಸದರಾದ ಈ. ತುಕಾರಾಂ ಹಾಗೂ ಡಾ. ಸಯ್ಯದ್ ನಾಸೀರ್ ಹುಸೇನ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.


ಬುಡಾ ಅಧ್ಯಕ್ಷ ಜೆ.ಎಸ್. ಆಂಜನೇಯಲು, ಲಿಡ್ಕರ್ ಅಧ್ಯಕ್ಷ ಮುಂಡ್ರಗಿ ನಾಗರಾಜ್, ಎಪಿಎಂಸಿ ಅಧ್ಯಕ್ಷ ಕಟ್ಟೇಮನಿ ನಾಗೇಂದ್ರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರಿಸ್ ಸುಮೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಹ ಭಾಗವಹಿಸಲಿದ್ದಾರೆ.


ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಂ. ಸೋಮಸುಂಧರ್, ಉಪ ನಿರ್ದೇಶಕ ಎಸ್.ಎನ್. ಮಂಜುನಾಥ್ ಮತ್ತು ಗರ್ಜಪ್ಪ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಶಶಿಕಾಂತ್ ಕಟ್ಟೀಮನಿ, ಹಿರಿಯ ಸಹಾಯಕ ನಿರ್ದೇಶಕ ಜೆ. ಶಂಕ್ರಪ್ಪ, ಎಪಿಎಂಸಿ ಕಾರ್ಯದರ್ಶಿ ವಿ.ಆರ್. ಜಯಕುಮಾರ್, ಪಶು ಸಂಗೋಪನಾ ಇಲಾಖೆಯ ಡಾ. ಸದಾಶಿವ ಉಪ್ಪಾರ್ ಹಾಗೂ ಡಾ. ರಾಜಶೇಖರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ.


ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ


“ಮೇಳದ ಮೂಲಕ ರೈತರಿಗೆ ಕೃಷಿ ಕ್ಷೇತ್ರದ ಇತ್ತೀಚಿನ ತಂತ್ರಜ್ಞಾನಗಳು ಹಾಗೂ ವೈಜ್ಞಾನಿಕ ಮಾಹಿತಿ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಆಯೋಜಕರು ಮನವಿ ಮಾಡಿದ್ದಾರೆ.


ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಎಸ್. ದೊಡ್ಡನಗೌಡ, ಉಪಾಧ್ಯಕ್ಷ ಸೊಂತಾ ಗಿರಿಧರ್, ಜಂಟಿ ಕಾರ್ಯದರ್ಶಿ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ. ರಾಮಚಂದ್ರ, ಖಜಾಂಚಿ ಸಿ.ಎಸ್. ಸತ್ಯನಾರಾಯಣ, ಪ್ರೆಸ್ ಮತ್ತು ಮೀಡಿಯಾ ಸಮಿತಿ ಅಧ್ಯಕ್ಷ ತಾಟಕೂರಿ ಶ್ರೀನಿವಾಸರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

News

ಕಾಂಗ್ರೆಸ್ ಕಛೇರಿ ಯಲ್ಲಿ ರಾಜೀವ್ ಗಾಂಧಿ ಪುಣ್ಯಸ್ಮರಣೆ ಆಚರಣೆ

21 May 2026

ಬಳ್ಳಾರಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆಯನ್ನು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಆಚರಿಸಲಾಯಿತು.


ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಲ್ಲಂ ಪ್ರಶಾಂತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ರಾಜೀವ್ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು, ದೇಶದ ಆಧುನಿಕ ಭಾರತ ನಿರ್ಮಾಣಕ್ಕೆ ರಾಜೀವ್ ಗಾಂಧಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು. ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ಕ್ರಾಂತಿಗೆ ಅಡಿಗಲ್ಲು ಹಾಕಿದ ನಾಯಕನಾಗಿ ಅವರು ದೇಶದ ಅಭಿವೃದ್ಧಿಯಲ್ಲಿ ವಿಶೇಷ ಪಾತ್ರವಹಿಸಿದ್ದರು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮಾನಯ್ಯ, ವಿರಸೇನಾ ರೆಡ್ಡಿ, ಕ್ರೈಸ್ತ ಅಭಿವೃದ್ಧಿ ನಿಗಮದ ರಾಜ್ಯ ನಿರ್ದೇಶಕ ಜಿ.ಜೆ. ರವಿಕುಮಾರ್, ಡಿಸಿಸಿ ಕಾರ್ಯಾಧ್ಯಕ್ಷ ಬೊಯಪಾಟಿ ವಿಷ್ಣುವರ್ಧನ್, ಡಿಸಿಸಿ ಉಪಾಧ್ಯಕ್ಷ ಕೆ. ಶ್ರೀನಿವಾಸುಲು, ಪ್ರಧಾನ ಕಾರ್ಯದರ್ಶಿ ಆಯಾಜ್ ಅಹಮ್ಮದ್, ನಗರ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಈರಣ್ಣ ಗೌಡ, ಕೆಪಿಸಿಸಿ ವಕ್ತಾರ ಬಿ.ಎಂ. ಪಾಟೀಲ್, ಮುಂಚೂಣಿ ಘಟಕಗಳ ಅಧ್ಯಕ್ಷರಾದ ಎರುಕುಲ ಸ್ವಾಮಿ, ಅಲಿವೇಲು ಸುರೇಶ್, ಧನುಂಜಯ್ ಹಮಲ್, ಶ್ರೀಕಾಂತ್, ಅತ್ತಾವುಲ್ಲ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.


ಡಿಸಿಸಿ ಕಾರ್ಯಕಾರಿಣಿ ಸದಸ್ಯ ವೆಂಕಟಲಕ್ಷ್ಮಿ ನಾರಾಯಣ, ಮುಖಂಡರಾದ ಬಿ.ಎ. ಮಲ್ಲೇಶ್ವರಿ, ಪರ್ವಿನ್ ಭಾನು, ಗೋನಾಳ್ ನಾಗಭೂಷಣ ಗೌಡ, ವಿಜಯ್, ಲಿಂಗರಾಜು ಹಾಗೂ ಇತರರು ಉಪಸ್ಥಿತರಿದ್ದರು.

News

*ಬಳ್ಳಾರಿಯಲ್ಲಿ ಓಬಿಸಿ ಘಟಕಕ್ಕೆ ಹೊಸ ಚೈತನ್ಯ ತುಂಬಿದ ಡಿ.ಟಿ. ಶ್ರೀನಿವಾಸ್ ಭೇಟಿ* *ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಒಗ್ಗಟ್ಟಾಗಲಿ: ಡಿ.ಟಿ. ಶ್ರೀನಿವಾಸ್*

21 May 2026

ಬಳ್ಳಾರಿ,ಮೇ.20: ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಿ.ಟಿ.ಶ್ರೀನಿವಾಸ್ ಹೇಳಿದರು.


ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಕಾಂಗ್ರೆಸ್ ಓಬಿಸಿ ಘಟಕದ ಸ್ವಾಗತ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


“ಬೂತ್ ಮಟ್ಟದಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿತಗೊಳಿಸುವ ಉದ್ದೇಶದಿಂದ ‘ನನ್ನ ಬೂತ್ – ನನ್ನ ಜೊತೆಗೆ’ ಅಭಿಯಾನ ಹಮ್ಮಿಕೊಳ್ಳಲಾಗಿದೆ.


ಪ್ರತಿಯೊಂದು ಬೂತ್‌ನಲ್ಲಿ 11ರಿಂದ 15 ಮಂದಿ ಹಿಂದುಳಿದ ವರ್ಗದವರನ್ನು ಗುರುತಿಸಿ ಸಂಘಟನೆಯೊಂದಿಗೆ ತೊಡಗಿಸುವ ಕಾರ್ಯ ನಡೆಯಲಿದೆ. ಅದರಲ್ಲಿ ಮಹಿಳೆಯರಿಗೂ ಅವಕಾಶ ಕಲ್ಪಿಸಲಾಗುತ್ತದೆ,” ಎಂದು ಹೇಳಿದರು.


ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 3 ಸಾವಿರದಿಂದ 4 ಸಾವಿರ ಮಂದಿ ಹಿಂದುಳಿದ ವರ್ಗದವರನ್ನು ಪಕ್ಷದ ಚಟುವಟಿಕೆಗೆ ಸೆಳೆಯುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.


2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದರು.

“ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ನನ್ನ ಕಚೇರಿಗೆ ಭೇಟಿ ನೀಡಬಹುದು. ಆದರೆ ಪಕ್ಷದ ಬಲವರ್ಧನೆಗೆ ಎಲ್ಲರೂ ಕೈಜೋಡಿಸಬೇಕು,” ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಲ್ಲಂ ಪ್ರಶಾಂತ್ ಮಾತನಾಡಿ, “ಓಬಿಸಿ ಘಟಕದ ಸಂಘಟನೆಗೆ ಜಿಲ್ಲಾ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ. ಪಕ್ಷವನ್ನು ಮತ್ತಷ್ಟು ಬಲಪಡಿಸುವ ಕೆಲಸವನ್ನು ಎಲ್ಲರೂ ಒಟ್ಟಾಗಿ ಮಾಡಬೇಕು,” ಎಂದರು.


ಜಿಲ್ಲಾ ಓಬಿಸಿ ಘಟಕದ ಅಧ್ಯಕ್ಷ ಸರಗು ನಾಗರಾಜ್ ಮಾತನಾಡಿ, “ಬಳ್ಳಾರಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಗಟ್ಟಿಯಾಗಿದ್ದು, ಓಬಿಸಿ ಘಟಕದ ಮೂಲಕ ಇನ್ನಷ್ಟು ಜನರನ್ನು ಪಕ್ಷದೊಂದಿಗೆ ಸಂಪರ್ಕಿಸುವ ಕಾರ್ಯ ಕೈಗೊಳ್ಳಲಾಗುತ್ತದೆ,” ಎಂದು ಹೇಳಿದರು.


ಸಭೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು. ಡಿ.ಟಿ. ಶ್ರೀನಿವಾಸ್ ಅವರ ಭೇಟಿ ಜಿಲ್ಲಾ ಕಾಂಗ್ರೆಸ್ ಸಂಘಟನೆಗೆ ಹೊಸ ಚೈತನ್ಯ ತುಂಬಿದೆ ಎಂದು ಪಕ್ಷದ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

News

ವಿ ಬಿ ಜಿ ರಾಮ್ ಜಿ ಕಾಯ್ದೆ ವಿರೋಧಿಸಿ ಎಐಕೆಕೆಎಂಎಸ್ ಪ್ರತಿಭಟನೆ

20 May 2026

ಬಳ್ಳಾರಿ, ಮೇ,20- ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆ ವತಿಯಿಂದ ವಿ ಬಿ ಜಿ ರಾಮ್ ಜಿ ಕಾಯ್ದೆ ರದ್ದತಿಗಾಗಿ ಮತ್ತು ಮನರೆಗಾ ಯೋಜನೆ ಮರು ಜಾರಿಗಾಗಿ ಆಗ್ರಹಿಸಿ ಕುರುಗೋಡು ಪಟ್ಟಣದಲ್ಲಿ ಪ್ರತಿಭಟನೆ ಮಾಡಿ, ಪ್ರಧಾನಿಗಳಿಗೆ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು

ಈ ಸಂಧರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ್ ಮಾತನಾಡುತ್ತಾ, ವಿ ಬಿ ಜಿ ರಾಮ್ ಜಿ ಕಾಯ್ದೆಯು ಸಂಪೂರ್ಣವಾಗಿ ಬಡ ಕೂಲಿ ಕಾರ್ಮಿಕರಿಂದ ಉದ್ಯೋಗ ಕಸೆಯುವ ಕಾಯ್ದೆಯಾಗಿದೆ, ಕೆಲಸ ನೀಡುವಲ್ಲಿ ಮೊದಲು ಗ್ರಾಮ ಪಂಚಾಯಿತಿಗಳಿಗೆ ಇದ್ದ ಅಧಿಕಾರವನ್ನು ರದ್ದು ಮಾಡಲಾಗಿದೆ, ಇನ್ನೂ ಮುಂದೆ ಈ ಕಾರ್ಯದಲ್ಲಿ ಗುತ್ತಿಗೆದಾರರ ಪ್ರವೇಶ ಮಾಡಲು ಯೋಜನೆ ರೂಪಿಸಲಾಗಿದ್ದು, ಇದೊಂದು ದೊಡ್ಡ ಷಡ್ಯಂತ್ರ ವಾಗಿದೆ ಎಂದು ತಿಳಿಸಿದರು

ರಾಜ್ಯ ಸಮಿತಿ ಸದಸ್ಯರಾದ ಈ.ಹನುಮಂತಪ್ಪ ಮಾತನಾಡುತ್ತಾ ರಾಜ್ಯ ಸರ್ಕಾರ ಬರೀ ಕೇಂದ್ರ ಸರ್ಕಾರದ ಮೇಲೆ ಜವಾಬ್ದಾರಿ ಹಾಕದೆ, ತಾವುಗಳು ಸಹ ರಾಜ್ಯದ ಜನರಿಗೆ ಉದ್ಯೋಗ ಒದಗಿಸಲು ಮುಂದಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂಧರ್ಭದಲ್ಲಿ ನರೇಗಾ ಉಳಿಸಿ ತಾಲ್ಲೂಕು ಸಮಿತಿ ರಚಿಸಲಾಯಿತು. ಈ ಸಮಿತಿಯ ಅದ್ಯಕ್ಷರಾಗಿ ಕಲ್ಲುಕಂಬ ಪಂಪಾಪತಿ, ಉಪಾಧ್ಯಕ್ಷರಾಗಿ ಮುಷ್ಟಗಟ್ಟ ಪಂಪನಗೌಡ, ಕಲ್ಲುಕಂಬ ಮಾರೆಪ್ಪ, ಕಾರ್ಯದರ್ಶಿಯಾಗಿ ಕೇರೇಕೆರೆ ಬಸವರಾಜ್ ಮತ್ತು 5 ಜನ ಜಂಟಿ ಕಾರ್ಯದರ್ಶಿಗಳು 23 ಜನ ಸದಸ್ಯರ ಬಲಿಷ್ಠ ಸಮಿತಿ ರಚಿಸಲಾಯಿತು.

ಸಂಘದ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಈ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುವಜನ ಸಂಘಟನೆ ಎಐಡಿವೈಒನ ಜಿಲ್ಲಾ ಅಧ್ಯಕ್ಷ ಕೋಳೂರು ಪಂಪಾಪತಿ ಮಾತನಾಡಿದರು. ತಾಲ್ಲೂಕು ಕಾರ್ಯದರ್ಶಿ ಕೆರೇಕೇರೆ ಬಸವರಾಜ್, ಜಿಲ್ಲಾ ಸಮಿತಿ ಸದಸ್ಯರಾದ ಮಾರೆಪ್ಪ ರೈತರಾದ ಕಾಲಿಂಗಪ್ಪ , ಹನುಮಂತಪ್ಪ, ಪಂಪನಗೌಡ, ಶಿವಪ್ಪ, ರುದ್ರಮ್ಮ, ರತ್ನಮ್ಮ, ವೀರೇಶ್, ಅಂಬರೀಷ, ದೊಡ್ಡಬಸವ, ವೆಂಕಟೇಶ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

News

ಬಳ್ಳಾರಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮುಲು ವಾಗ್ದಾಳಿ

19 May 2026

“ಮೂರು ವರ್ಷದ ಸಾಧನೆ ಎಂದರೆ ನೂರು ಸುಳ್ಳಿನ ಸಮಾವೇಶ” ಆರೋಪ


ಬಳ್ಳಾರಿ: ರಾಜ್ಯ ಸರ್ಕಾರದ ಮೂರು ವರ್ಷದ ಆಡಳಿತವನ್ನು ತೀವ್ರವಾಗಿ ಟೀಕಿಸಿದ ಬಿಜೆಪಿ ನಾಯಕ ಬಿ. ಶ್ರೀರಾಮುಲು, “ಮೂರು ವರ್ಷದಲ್ಲಿ ನೂರು ಸುಳ್ಳು ಹೇಳಿರುವುದೇ ಸರ್ಕಾರದ ಸಾಧನೆ. ಅದನ್ನೇ ಈಗ ಸಮಾವೇಶದ ಮೂಲಕ ಜನರಿಗೆ ತೋರಿಸಲು ಹೊರಟಿದ್ದಾರೆ” ಎಂದು ಆರೋಪಿಸಿದರು.


ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಸಿದ್ದರಾಮಯ್ಯ ಸುಳ್ಳಿನ ಮಾಲೀಕರಾದರೆ, ಡಿ.ಕೆ. ಶಿವಕುಮಾರ್ ಆ ಸುಳ್ಳಿನ ಸಾಕ್ಷಿದಾರರು. ಸುಳ್ಳಿನ ಅಡಿಪಾಯದ ಮೇಲೆಯೇ ಈ ಸರ್ಕಾರ ನಡೆಯುತ್ತಿದೆ” ಎಂದು ದೂರಿದರು.


ರಾಜ್ಯದ ರೈತರ ಪರಿಸ್ಥಿತಿ ಹದಗೆಟ್ಟಿದ್ದು, ರೈತರಿಗೆ ಸಮರ್ಪಕ ನೆರವು ಸಿಗುತ್ತಿಲ್ಲ ಎಂದು ಆರೋಪಿಸಿದ ಅವರು, ಹಾಲು ಉತ್ಪಾದಕರಿಗೆ ನೀಡಬೇಕಾದ ಪ್ರೋತ್ಸಾಹಧನ ಬಾಕಿಯಾಗಿದೆ ಎಂದು ಹೇಳಿದರು. “ಬೀಜ ಮತ್ತು ಕೃಷಿ ವೆಚ್ಚಗಳು ಏರಿಕೆಯಾಗಿವೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದು ಆತ್ಮಹತ್ಯೆಗಳ ಪ್ರಮಾಣ ಹೆಚ್ಚುತ್ತಿದೆ. ರೈತರ ಬದುಕು ಉಳಿಸುವ ಬದಲು ಸರ್ಕಾರ ರೈತರ ಆತ್ಮಹತ್ಯೆ ಭಾಗ್ಯ ನೀಡುವ ಕೆಲಸ ಮಾಡುತ್ತಿದೆ” ಎಂದು ಕಿಡಿಕಾರಿದರು.


ರೈತರ ಸಾವಿನ ಅಂಕಿ–ಅಂಶಗಳನ್ನು ಉಲ್ಲೇಖಿಸಿದ ಶ್ರೀರಾಮುಲು, “ಇದು ಮಾನಗೆಟ್ಟ ಸರ್ಕಾರ. ರೈತರ ನೋವಿಗೆ ಸ್ಪಂದಿಸುವ ಬದಲು ಸರ್ಕಾರ ರಾಜಕೀಯ ಸಮಾವೇಶಗಳಲ್ಲಿ ತೊಡಗಿದೆ” ಎಂದು ಟೀಕಿಸಿದರು. ಕೇಂದ್ರ ಸರ್ಕಾರದ ರಸಗೊಬ್ಬರಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದರು.


ಕೇಂದ್ರದ ಕಿಸಾನ್ ಸನ್ಮಾನ್ ಯೋಜನೆ ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ದೂರಿದ ಅವರು, ನೀರು, ವಿದ್ಯುತ್, ಭೂ ನೋಂದಣಿ ಸೇರಿದಂತೆ ಎಲ್ಲ ಸೇವೆಗಳ ದರ ಏರಿಕೆಯಾಗಿದೆ ಎಂದು ಹೇಳಿದರು. “ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರನ್ನು ಮರಳು ಮಾಡುವ ಕೆಲಸ ನಡೆಯುತ್ತಿದೆ. ಜನರಿಗೆ ಶಾಶ್ವತ ಅಭಿವೃದ್ಧಿ ನೀಡುವ ಬದಲು ಮೋಸದ ರಾಜಕಾರಣ ನಡೆಯುತ್ತಿದೆ” ಎಂದು ಆರೋಪಿಸಿದರು.


ರಾಜ್ಯದ ಸಾರಿಗೆ ಇಲಾಖೆಯ ಸ್ಥಿತಿಗತಿಗಳ ಕುರಿತು ಮಾತನಾಡಿದ ಅವರು, ಕೆಎಸ್‌ಆರ್‌ಟಿಸಿ ನೌಕರರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದರು. “ಸಾರಿಗೆ ನೌಕರರ ಮುಷ್ಕರ ತಡೆಯಲು ಸರ್ಕಾರಕ್ಕೆ ಆಗುತ್ತಿಲ್ಲ. ವೇತನ ಹೆಚ್ಚಳವೂ ಇಲ್ಲ. ಹಳೆಯ ಬಸ್‌ಗಳೇ ರಸ್ತೆಯಲ್ಲಿ ಓಡುತ್ತಿವೆ. ಪಂಚರ್ ಹಾಕಿಸಲು ಹಣವಿಲ್ಲದ ಪರಿಸ್ಥಿತಿ ಬಂದಿದೆ. ಬಾಗಿಲುಗಳು ಕಿತ್ತು ಹೋದರೂ ದುರಸ್ತಿ ಮಾಡಲಾಗುತ್ತಿಲ್ಲ” ಎಂದು ಟೀಕಿಸಿದರು.


ಅಂಗನವಾಡಿ ನೌಕರರು ಹಾಗೂ ಸರ್ಕಾರಿ ನೌಕರರ ಸಂಬಳದ ವಿಷಯದಲ್ಲಿಯೂ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಅವರು, “ಎಲ್ಲಾ ಇಲಾಖೆಗಳಲ್ಲೂ ಆಡಳಿತ ಸಂಪೂರ್ಣ ಕುಸಿದಿದೆ. ಇಂತಹ ಸಂದರ್ಭದಲ್ಲಿ ಮೂರು ವರ್ಷದ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ?” ಎಂದು ಪ್ರಶ್ನಿಸಿದರು.


ರಾಜ್ಯದಲ್ಲಿ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸಮಾಜವನ್ನು ವಿಭಜಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ ಶ್ರೀರಾಮುಲು, ಹಿಜಾಬ್ ವಿಚಾರವನ್ನು ಉಲ್ಲೇಖಿಸಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. “ಹಿಜಾಬ್ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇರುವಾಗಲೇ ಸರ್ಕಾರ ನಿಷೇಧ ಹಿಂಪಡೆಯಲು ಮುಂದಾಗಿರುವುದು ಯಾಕೆ? ಇದು ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ” ಎಂದರು.


ಕಾಂಗ್ರೆಸ್ ನಾಯಕ ನಾಸೀರ್ ಹುಸೇನ್ ಕುರಿತ ವಿವಾದವನ್ನು ಉಲ್ಲೇಖಿಸಿದ ಅವರು, “ಪಾಕಿಸ್ತಾನ ಪರ ಘೋಷಣೆಗಳ ವಿಚಾರದಲ್ಲಿಯೂ ಕಾಂಗ್ರೆಸ್ ಮೌನವಾಗಿದೆ” ಎಂದು ಆರೋಪಿಸಿದರು. ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಸರ್ಕಾರದಿಂದ ನಡೆಯುತ್ತಿದೆ. ಎಂದು ದೂರಿದ ಅವರು, ಹಿಂದೂ ಹಬ್ಬಗಳ ಮೇಲೂ ದಾಳಿ ನಡೆಯುತ್ತಿದೆ ಎಂದು ಹೇಳಿದರು.


ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಅಂತರ್ದ್ವಂದ್ವ ನಡೆಯುತ್ತಿದೆ ಎಂದು ಆರೋಪಿಸಿದ ಶ್ರೀರಾಮುಲು, “ಈಗ ಸಿದ್ದರಾಮಯ್ಯ ಡಬ್ಬಿಯೇ ಹೆಚ್ಚು ಸೌಂಡ್ ಮಾಡುತ್ತಿದೆ” ಎಂದು ವ್ಯಂಗ್ಯವಾಡಿದರು.


ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣವನ್ನು ಉಲ್ಲೇಖಿಸಿದ ಅವರು, “ಹಗರಣದಲ್ಲಿ ಹಣ ಹೊಡೆದಿದ್ದಕ್ಕೆ ಸಮಾವೇಶ ಮಾಡುತ್ತಿದ್ದೀರಾ? ರೈತರ ಸಾವಿಗೆ ಸಮಾವೇಶ ಮಾಡುತ್ತಿದ್ದೀರಾ?” ಎಂದು ಪ್ರಶ್ನಿಸಿದರು. ಕುಕ್ಕರ್ ಬಾಂಬ್ ಪ್ರಕರಣದ ಆರೋಪಿಗಳನ್ನು “ಬ್ರದರ್” ಎಂದು ಕರೆಯಲಾಗಿದೆ ಎಂದು ಟೀಕಿಸಿದ ಅವರು, “ಯಾವ ಸಾಧನೆಗಾಗಿ ಸಮಾವೇಶ ಮಾಡುತ್ತಿದ್ದಾರೆ ಎಂಬುದನ್ನು ಸರ್ಕಾರವೇ ಹೇಳಬೇಕು” ಎಂದರು.


ಮುಸ್ಲಿಂ ಕಾಲೋನಿಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ಮೀಸಲಿಡಲಾಗುತ್ತಿದೆ ಎಂದು ಆರೋಪಿಸಿದ ಶ್ರೀರಾಮುಲು, “ಒಂದು ಸಮುದಾಯದ ಓಲೈಕೆಗಾಗಿ ಸರ್ಕಾರ ಆಡಳಿತ ನಡೆಸುತ್ತಿದೆ. ಹಿಂದೂಗಳ ಮೇಲೆ ಮಾತ್ರ ಪ್ರಕರಣ ದಾಖಲಿಸುವ ರಾಜಕಾರಣ ನಡೆಯುತ್ತಿದೆ” ಎಂದು ದೂರಿದರು.


ರಾಜ್ಯದ ಜನರು ಕಾಂಗ್ರೆಸ್ ಆಡಳಿತದಿಂದ ಬೇಸತ್ತಿದ್ದಾರೆ ಎಂದು ಹೇಳಿದ ಅವರು, “ಸೂರ್ಯ ಮತ್ತು ಚಂದ್ರ ಇರುವಷ್ಟು ಸತ್ಯವಾಗಿ 2028ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

News

ಒಳ ಮೀಸಲಾತಿ ನೀಡಿಕೆಯಲ್ಲಿ ಕಾಂಗ್ರೆಸ್ ಗೊಂದಲ ಸೃಷ್ಟಿ: ಹನುಮಂತಪ್ಪ

18 May 2026

ಬಳ್ಳಾರಿ, ಮೇ.18: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಯಾಗಿದ್ದಾಗ ಮಾಡಿದ್ದ ಒಳ ಮೀಸಲಾತಿಯನ್ನು ಜಾರಿಗೊಳಿಸಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಮೀಸಲಾತಿ ಅನುಷ್ಠಾನ ವಿಷಯದಲ್ಲಿ ಗೊಂದಲ ಸೃಷ್ಟಿಸಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷಹ ಎಚ್.ಹನುಮಂತಪ್ಪ ಆರೋಪಿಸಿದ್ದಾರೆ.

ಅವರು ನಿನ್ನೆ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ

ಸುದ್ದಿಗೋಷ್ಠಿಯಲ್ಲಿ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ನಿಜಕ್ಕೂ ದಲಿತ ಪರ ಕಾಳಜಿಯಿದ್ದಿದ್ದರೆ ನಾಗಮೋಹನ್ ದಾಸ್ ವರದಿಯನ್ನು ಅನುಷ್ಠಾನಗೊಳಿಸಬೇಕಿತ್ತು. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ದಲಿತರ ಮತಗಳು ಮಾತ್ರ ಬೇಕೇ ವಿನಾ, ದಲಿತರ ಕಲ್ಯಾಣದ ಯಾವ ಕಾಳಜಿಯೂ ಈ ಸರ್ಕಾರಕ್ಕಿಲ್ಲ. ಶೋಷಿತ ಸಮುದಾಯಗಳ ಅಭಿವೃದ್ಧಿಗೆಂದೇ ಮೀಸಲಾಗಿರುವ ಎಸಿಪಿ, ಟಿಎಸ್ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿರಲಿಲ್ಲ ಎಂದು ಆರೋಪಿಸಿದರು.

ದಲಿತರಿಗೆ ಒಳ ಮೀಸಲಾತಿ ವಿಚಾರದಲ್ಲಿ ನೆರೆಯ ತೆಲಂಗಾಣ ಸರ್ಕಾರ ತೆಗೆದುಕೊಂಡ ಮಹತ್ವದ ನಿರ್ಧಾರವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ತೆಗೆದುಕೊಳ್ಳದಿರುವ ಕುರಿತು ಕಾಂಗ್ರೆಸ್ ಪಕ್ಷದಲ್ಲಿರುವ ದಲಿತ ನಾಯಕರೇ ಧ್ವನಿ ಎತ್ತದಿರುವುದು ವಿಪರ್ಯಾಸ ಸಂಗತಿಯಾಗಿದೆ. ಶೋಷಿತ ಸಮುದಾಯಗಳ ವಿಚಾರ ಬಂದಾಗ ಬಿಜೆಪಿ ಈ ಮೊದಲಿನಿಂದಲೂ ಧ್ವನಿ ಎತ್ತುತ್ತಲೇ ಬಂದಿದೆ. ಮೀಸಲಾತಿ ಜಾರಿ ನೀತಿಯಲ್ಲಿ ಕಾಂಗ್ರೆಸ್ ಮಾಡುತ್ತಿರುವ ಗೊಂದಲ ಹಾಗೂ ವಿಭಿನ್ನ ನೀತಿಗಳ ವಿರುದ್ದ ಬಿಜೆಪಿ ಹೋರಾಟ ನಡೆಸಲಿದೆಂದರು.

ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ನಗರದ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಮಾತನಾಡಿ, ದಲಿತರ ಮತಗಳನ್ನು ಪಡೆದು ಅಧಿಕಾರಕ್ಕೆ ಬರುವ ಕಾಂಗ್ರೆಸ್ಗೆ ಈ ಸಮುದಾಯಗಳ ಅಭಿವೃದ್ಧಿಯ ಬಗ್ಗೆ ಕಾಳಜಿ ಇಲ್ಲ. ಮೀಸಲಾತಿ ವಿಚಾರದಲ್ಲಿನ ಗೊಂದಲವನ್ನು ತಿಳಿಗೊಳಿಸಬೇಕು ಎಂದು ಆಗ್ರಹಿಸಿದರು.

News

ಐಟಿ ಇಲಾಖೆಯ ದತ್ತಾಂಶದಿಂದ ಅನರ್ಹರ ಬೇಟೆ: ಬಳ್ಳಾರಿಯಲ್ಲಿ 4,764 ಬಿಪಿಎಲ್ ಕಾರ್ಡ್ ರದ್ದು ಅನ್ನಭಾಗ್ಯ ಸೌಲಭ್ಯ ದುರುಪಯೋಗಕ್ಕೆ ಕಡಿವಾಣ; ಅಧಿಕಾರಿಗಳ ಡಿಜಿಟಲ್ ಕಾರ್ಯಾಚರಣೆ ತೀವ್ರ

18 May 2026

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಬಡವರಿಗಾಗಿ ರೂಪಿಸಲಾಗಿರುವ ಬಿಪಿಎಲ್ ಪಡಿತರ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದ ಸಾವಿರಾರು ಅನರ್ಹರು ಇದೀಗ ಸರ್ಕಾರದ ಡಿಜಿಟಲ್ ಜಾಲದಲ್ಲಿ ಸಿಕ್ಕಿಬಿದ್ದಿದ್ದಾರೆ. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಆದಾಯ ತೆರಿಗೆ ಇಲಾಖೆ ಹಾಗೂ ಸಾರಿಗೆ ಇಲಾಖೆಯ ದತ್ತಾಂಶಗಳನ್ನು ಸಮನ್ವಯಗೊಳಿಸಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಜಿಲ್ಲೆಯಾದ್ಯಂತ 4,764 ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಿರುವುದು ಬೆಳಕಿಗೆ ಬಂದಿದೆ.


ಜಿಲ್ಲೆಯಲ್ಲಿ ಪ್ರಸ್ತುತ 24,773 ಅಂತ್ಯೋದಯ ಕಾರ್ಡ್ ಹಾಗೂ 2,74,280 ಬಿಪಿಎಲ್ ಕಾರ್ಡ್ಗಳು ಚಾಲ್ತಿಯಲ್ಲಿವೆ. ಬಡ ಕುಟುಂಬಗಳಿಗೆ ‘ಅನ್ನಭಾಗ್ಯ’ ಯೋಜನೆಯಡಿ ಉಚಿತ ಅಕ್ಕಿ ಹಾಗೂ ರಿಯಾಯಿತಿ ದರದಲ್ಲಿ ಪಡಿತರ ವಿತರಣೆ ನಡೆಯುತ್ತಿದ್ದು, ಸರ್ಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಗೂ ಬಿಪಿಎಲ್ ಕಾರ್ಡ್ ಪ್ರಮುಖ ಆಧಾರವಾಗಿದೆ. ಆದರೆ, ಈ ಪಟ್ಟಿಯಲ್ಲಿಯೇ ಆರ್ಥಿಕವಾಗಿ ಸದೃಢರಾದವರು, ಆದಾಯ ತೆರಿಗೆ ಪಾವತಿಸುವವರು, ದೊಡ್ಡ ಪ್ರಮಾಣದ ಭೂಮಿ ಹೊಂದಿರುವವರು ಮತ್ತು ಐಷಾರಾಮಿ ವಾಹನಗಳಲ್ಲಿ ಸಂಚರಿಸುವವರೂ ಸೇರಿಕೊಂಡಿರುವುದು ಇಲಾಖೆ ಅಧಿಕಾರಿಗಳಿಗೆ ಆಘಾತ ಉಂಟುಮಾಡಿದೆ.


ಈವರೆಗೆ ಅನರ್ಹ ಕಾರ್ಡ್ ಪತ್ತೆ ಪ್ರಕ್ರಿಯೆ ಹೆಚ್ಚಾಗಿ ಸ್ಥಳೀಯ ಮಟ್ಟದ ಪರಿಶೀಲನೆ, ಮನೆಮನೆ ಭೇಟಿ ಹಾಗೂ ಸಾರ್ವಜನಿಕ ದೂರುಗಳ ಆಧಾರದಲ್ಲಿಯೇ ನಡೆಯುತ್ತಿತ್ತು. ಆದರೆ, ಈ ಬಾರಿ ಆಹಾರ ಇಲಾಖೆ ಸಂಪೂರ್ಣವಾಗಿ ಡಿಜಿಟಲ್ ತಂತ್ರಜ್ಞಾನಕ್ಕೆ ಮೊರೆ ಹೋಗಿದೆ. ಪಡಿತರ ಚೀಟಿಗೆ ಕಡ್ಡಾಯಗೊಳಿಸಲಾದ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆ ಹಾಗೂ ಪ್ಯಾನ್ ಕಾರ್ಡ್ ಮಾಹಿತಿಯೊಂದಿಗೆ ತಾಳೆ ಹಾಕಿ ಪರಿಶೀಲನೆ ನಡೆಸಲಾಗಿದೆ.


ಆದಾಯ ತೆರಿಗೆ ಇಲಾಖೆಯಿಂದ ಪಡೆದ ಮಾಹಿತಿಯ ಆಧಾರದಲ್ಲಿ ವರ್ಷಕ್ಕೆ ನಿಗದಿತ ಮಿತಿಗಿಂತ ಹೆಚ್ಚು ಆದಾಯ ಹೊಂದಿರುವವರ ವಿವರ ಸಂಗ್ರಹಿಸಲಾಯಿತು. ಇದೇ ವೇಳೆ ಸಾರಿಗೆ ಇಲಾಖೆಯ ದಾಖಲೆಗಳೊಂದಿಗೆ ಹೋಲಿಕೆ ನಡೆಸಿ, ಬಿಪಿಎಲ್ ಕಾರ್ಡ್ ಹೊಂದಿರುವವರ ಹೆಸರಿನಲ್ಲಿ ಟ್ಯಾಕ್ಸಿ ಹೊರತುಪಡಿಸಿ ಖಾಸಗಿ ನಾಲ್ಕು ಚಕ್ರದ ವಾಹನಗಳಿರುವುದನ್ನು ಪತ್ತೆ ಹಚ್ಚಲಾಗಿದೆ.


ಈ ಡಿಜಿಟಲ್ ಪರಿಶೀಲನೆಯಲ್ಲೇ ಸಾವಿರಾರು ಅನರ್ಹರು ಬಯಲಾಗಿದ್ದು, ಬಳ್ಳಾರಿ ನಗರ ಭಾಗದಲ್ಲಿಯೇ ಗರಿಷ್ಠ 3,960 ಕಾರ್ಡ್ಗಳು ರದ್ದಾಗಿವೆ. ನಗರ ಪ್ರದೇಶಗಳಲ್ಲಿ ಸರ್ಕಾರಿ ನೌಕರರು, ಸಣ್ಣ ಉದ್ಯಮಿಗಳು ಹಾಗೂ ಆರ್ಥಿಕವಾಗಿ ಸದೃಢ ಕುಟುಂಬಗಳು ಸಹ ಬಿಪಿಎಲ್ ಸೌಲಭ್ಯ ಪಡೆಯುತ್ತಿದ್ದ ವಿಚಾರ ಬಹಿರಂಗವಾಗಿದೆ.


ಆಹಾರ ಇಲಾಖೆಯ ಅಧಿಕಾರಿಗಳ ಪ್ರಕಾರ, ಬಿಪಿಎಲ್ ಕಾರ್ಡ್ ಪಡೆಯಲು ಸರ್ಕಾರ ನಿಗದಿಪಡಿಸಿರುವ ಮಾನದಂಡಗಳು ಸ್ಪಷ್ಟವಾಗಿವೆ. ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷ ಮೀರಿರಬಾರದು. ನಗರ ಪ್ರದೇಶದಲ್ಲಿ 1,000 ಚದರ ಅಡಿಗಿಂತ ದೊಡ್ಡ ಸ್ವಂತ ಪಕ್ಕಾ ಮನೆ ಇರಬಾರದು. ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ಸಮಾನ ಪ್ರಮಾಣದ ನೀರಾವರಿ ಭೂಮಿ ಹೊಂದಿದ್ದರೂ ಅನರ್ಹರಾಗುತ್ತಾರೆ. ಜೀವನೋಪಾಯಕ್ಕಾಗಿ ಬಳಸುವ ಆಟೊ ಅಥವಾ ಟ್ಯಾಕ್ಸಿ ಹೊರತುಪಡಿಸಿ ಖಾಸಗಿ ನಾಲ್ಕು ಚಕ್ರದ ವಾಹನ ಹೊಂದಿರುವವರಿಗೂ ಬಿಪಿಎಲ್ ಸೌಲಭ್ಯ ಲಭ್ಯವಿಲ್ಲ. ಆದಾಯ ತೆರಿಗೆ ಅಥವಾ ವೃತ್ತಿ ತೆರಿಗೆ ಪಾವತಿಸುವವರು ಸಂಪೂರ್ಣ ಅನರ್ಹರಾಗುತ್ತಾರೆ.


ಆದರೆ, ಈ ನಿಯಮಗಳನ್ನು ಉಲ್ಲಂಘಿಸಿ ಹಲವು ಮಂದಿ ವರ್ಷಗಳಿಂದ ಪಡಿತರ ಪಡೆಯುತ್ತಿದ್ದರೆಂಬ ಸಂಗತಿ ಈಗ ಹೊರಬಿದ್ದಿದೆ. ಕೇವಲ ಅಕ್ಕಿ ಮತ್ತು ಪಡಿತರ ಸೌಲಭ್ಯವಷ್ಟೇ ಅಲ್ಲದೆ, ಉಚಿತ ವೈದ್ಯಕೀಯ ಸೇವೆ, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಸೇರಿದಂತೆ ಹಲವು ಯೋಜನೆಗಳ ಪ್ರಯೋಜನಕ್ಕೂ ಬಿಪಿಎಲ್ ಕಾರ್ಡ್ ಬಳಸಲಾಗುತ್ತಿದೆ. ಇದರಿಂದ ನಿಜವಾದ ಅರ್ಹ ಬಡ ಕುಟುಂಬಗಳಿಗೆ ಸಿಗಬೇಕಾದ ಸೌಲಭ್ಯದಲ್ಲಿ ಅನ್ಯಾಯವಾಗುತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲೂ ಕೇಳಿಬರುತ್ತಿದೆ.


ಜಿಲ್ಲಾವಾರು ಅಂಕಿಅಂಶಗಳ ಪ್ರಕಾರ, ಬಳ್ಳಾರಿ ತಾಲೂಕಿನಲ್ಲಿ ಅತಿ ಹೆಚ್ಚು 3,960 ಕಾರ್ಡ್ಗಳು ರದ್ದಾಗಿದ್ದರೆ, ಸಿರಗುಪ್ಪದಲ್ಲಿ 243, ಕುರುಗೋಡಿನಲ್ಲಿ 190, ಸಂಡೂರಿನಲ್ಲಿ 168 ಹಾಗೂ ಕಂಪ್ಲಿಯಲ್ಲಿ 59 ಕಾರ್ಡ್ಗಳು ಅನರ್ಹವೆಂದು ಘೋಷಿಸಲ್ಪಟ್ಟಿವೆ.


ಈ ಕುರಿತು ಪ್ರತಿಕ್ರಿಯಿಸಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ದೇವರಾಜ್, “ಜಿಲ್ಲೆಯಲ್ಲಿ ಅನರ್ಹ ಪಡಿತರ ಕಾರ್ಡ್ಗಳನ್ನು ರದ್ದುಗೊಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇದು ಕೇವಲ ಆರಂಭ ಮಾತ್ರ. ಇನ್ನಷ್ಟು ಪರಿಣಾಮಕಾರಿಯಾಗಿ ಪರಿಶೀಲನೆ ನಡೆಸಿ ಅರ್ಹರಿಗೆ ಮಾತ್ರ ಸೌಲಭ್ಯ ತಲುಪುವಂತೆ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.


ಸರ್ಕಾರದ ಸೌಲಭ್ಯಗಳು ನಿಜವಾದ ಬಡವರ ಕೈ ಸೇರಬೇಕಾದರೆ ಇಂತಹ ಡಿಜಿಟಲ್ ಪರಿಶೀಲನೆ ಹಾಗೂ ಇಲಾಖಾಂತರ ಸಮನ್ವಯ ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ

ವ್ಯಕ್ತವಾಗುತ್ತಿದೆ.

News

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳಕ್ಕೆ ಎಸ್.ಯು.ಸಿ.ಐ ಖಂಡನೆ

17 May 2026

ಬಳ್ಳಾರಿ, ಮೇ.17: ಎಸ್.ಯು.ಸಿ.ಐ (ಸಿ) ಪಕ್ಷದ ವತಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವನ್ನು ವಿರೋಧಿಸಿ ಕುರುಗೋಡು ಪಟ್ಟಣದಲ್ಲಿಂದು ಪ್ರತಿಭಟನೆ ಮಾಡಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು 

ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಲೀಟರಿಗೆ ತಲಾ ರೂ. 3ರಂತೆ ಏರಿಸಿರುವ ಕ್ರಮವನ್ನು ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷವು ತೀವ್ರವಾಗಿ ಖಂಡಿಸುತ್ತದೆ. 

ಇಂಧನ ಬೆಲೆ ಏರಿಕೆಯು ಬೇರೆಲ್ಲ ಅವಶ್ಯಕ ವಸ್ತುಗಳನ್ನು ದುಬಾರಿಗೊಳಿಸಿ, ಹಣದುಬ್ಬರಕ್ಕೆ ಕಾರಣವಾಗುತ್ತಿದೆ. ಅಮೆರಿಕಾ - ಇಸ್ರೇಲ್ ಕೂಟವು ಇರಾನ್ ಮೇಲೆ ನಡೆಸುತ್ತಿರುವ ಯುದ್ಧವೇ ಈ ಬೆಲೆ ಏರಿಕೆಗೆ ಕಾರಣ ಎಂದು ಕೇಂದ್ರ ಬಿಜೆಪಿ ಸರ್ಕಾರವು ಸಮರ್ಥಿಸಿಕೊಳ್ಳುತ್ತಿದೆ. ಆದರೆ ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುವ ಅವಕಾಶವನ್ನು ಅಮೆರಿಕಾದ ಒತ್ತಡಕ್ಕೆ ಮಣಿದು ಕೈಚೆಲ್ಲಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಅಲ್ಲದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಅರ್ಧದಷ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆ ಗಳೇ ಇವೆ. 

ಹಾಗಾಗಿ ತಕ್ಷಣವೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆರಿಗೆಗಳನ್ನು ಕಡಿತಗೊಳಿಸಬೇಕು, ತೈಲ ಕಂಪನಿಗಳ ಲಾಭಕ್ಕಾಗಿ, ದೇಶದೊಳಗೆಯೇ ಶುದ್ಧೀಕರಣ ಮಾಡಿ ಉತ್ಪಾದಿಸುವ ಪೆಟ್ರೋಲ್ ಮತ್ತು ಡೀಸೆಲ್ ಗಳಿಗೆ ಜಾಗತಿಕ ದರಗಳನ್ನು ನಿಗದಿ ಮಾಡುವ ನೀತಿಯನ್ನು ಕೈಬಿಡಬೇಕು. ಈ ಯುದ್ಧವನ್ನು ನಿಲ್ಲಿಸಿ, ಬೇರೆ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸದಂತೆ ಅಮೆರಿಕಾದ ಸಾಮ್ರಾಜ್ಯಶಾಹಿಗಳ ಮೇಲೆ ಭಾರತವು ಒತ್ತಡ ಹೇರಬೇಕು ಎಂದು ಆಗ್ರಹಿಸಿದರು

ಈ ಸಂಧರ್ಭದಲ್ಲಿ ಕುರುಗೋಡು ಸ್ಥಳೀಯ ಸಮಿತಿ ಕಾರ್ಯದರ್ಶಿ ಗೋವಿಂದ್, ಸಮಿತಿ ಸದಸ್ಯರಾದ ಗುರಳ್ಳಿ ರಾಜ , ಮಣಿಕಂಠ ಕಾರ್ಮಿಕರಾದ ಅಂಬರೀಷ್, ಕುರಿ ಮಲ್ಲಯ್ಯ, ವೀರೇಶ್ , ತಿಪ್ಪೇಸ್ವಾಮಿ, ಬಸವರಾಜ್, ಶ್ರೀನಿವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು

News

ಕುಡುತಿನಿಯಲ್ಲಿ ಉದ್ವಿಗ್ನತೆ ಜಮೀನಿಗೆ ತೆರಳುತ್ತಿದ್ದ ಭೂಸಂತ್ರಸ್ತ ರೈತರನ್ನು ವಶಕ್ಕೆ ಪಡೆದ ಪೊಲೀಸರು

16 May 2026

ಬಳ್ಳಾರಿ, ಮೇ 16: ಮಿತ್ತಲ್ ಉಕ್ಕು ಕಾರ್ಖಾನೆಗಾಗಿ ಹಿಂದೆ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಜಿಂದಾಲ್ ಸಂಸ್ಥೆಗೆ ಹಸ್ತಾಂತರಿಸುವ ಕ್ರಮವನ್ನು ವಿರೋಧಿಸಿ ಶನಿವಾರ ಕುಡುತಿನಿಯಲ್ಲಿ ಪ್ರತಿಭಟನೆಗೆ ಮುಂದಾದ ಭೂಸಂತ್ರಸ್ತ ರೈತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಉದ್ವಿಗ್ನತೆಗೆ ಕಾರಣವಾಯಿತು.


ಮಿತ್ತಲ್ ಕಂಪನಿಗೆ ನೀಡಿದ್ದ ಜಮೀನಿನತ್ತ ಎತ್ತಿನ ಬಂಡಿಗಳ ಮೂಲಕ ತೆರಳಿ ಸಂಕೇತಾತ್ಮಕವಾಗಿ ಪ್ರವೇಶಿಸುವುದಾಗಿ ಘೋಷಿಸಿದ್ದ ರೈತರು ಬೆಳಗ್ಗಿನಿಂದಲೇ ಕುಡುತಿನಿ ಮತ್ತು ಸುತ್ತಮುತ್ತಲ ಗ್ರಾಮಗಳಿಂದ ಸೇರತೊಡಗಿದರು. ಬಳಿಕ ಬೈಪಾಸ್ ರಸ್ತೆಯ ಮೂಲಕ ಜಮೀನಿನತ್ತ ಹೊರಟಾಗ ಪೊಲೀಸರು ತಡೆದು ನಿಲ್ಲಿಸಿದರು. ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.


ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಪೊಲೀಸರು ಹೋರಾಟ ಸಮಿತಿಯ ಮುಖಂಡರು ಸೇರಿದಂತೆ ನೂರಕ್ಕೂ ಹೆಚ್ಚು ರೈತರನ್ನು ವಶಕ್ಕೆ ಪಡೆದು ತೋರಣಗಲ್ಲಿನ ಶಾಲಾ ಮೈದಾನಕ್ಕೆ ಕರೆದೊಯ್ದರು. ಕೆಲ ರೈತರು ಮಾತ್ರ ಸ್ಥಳದಲ್ಲೇ ಧರಣಿ ನಡೆಸಿ ಸರ್ಕಾರ ಹಾಗೂ ಕೆಐಎಡಿಬಿ ವಿರುದ್ಧ ಘೋಷಣೆ ಕೂಗಿದರು.


“ಜಮೀನು ಮರಳಿ ನೀಡಿ ಅಥವಾ ನ್ಯಾಯಯುತ ಪರಿಹಾರ ನೀಡಿ”


ಸುಮಾರು ದಶಕದ ಹಿಂದೆ ಉಕ್ಕು ಕಾರ್ಖಾನೆ ಸ್ಥಾಪನೆ ಉದ್ದೇಶದಿಂದ ಕುಡುತಿನಿ, ತೋರಣಗಲ್ಲು ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರಿಂದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಲಕ್ಷ್ಮೀ ಮಿತ್ತಲ್ ಕಂಪನಿಗೆ ಸಾವಿರಾರು ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ನಂತರ ಮಿತ್ತಲ್ ಕಂಪನಿ ಯೋಜನೆ ಮುಂದುವರಿಸಲು ಹಿಂದೇಟು ಹಾಕಿತ್ತು.


ಈಗ ಆ ಜಮೀನನ್ನು ಜಿಂದಾಲ್ ಸಂಸ್ಥೆಗೆ ಹೆಚ್ಚಿನ ದರದಲ್ಲಿ ಹಸ್ತಾಂತರಿಸಲು ಕೆಐಎಡಿಬಿ ಮುಂದಾಗಿದೆ ಎಂಬ ಆರೋಪವನ್ನು ರೈತರು ಮಾಡುತ್ತಿದ್ದಾರೆ. “ಮಿತ್ತಲ್ ಕಂಪನಿ ಕೈಗಾರಿಕೆ ಸ್ಥಾಪಿಸದಿದ್ದರೆ ನಮ್ಮ ಜಮೀನು ಹಿಂದಕ್ಕೆ ನೀಡಬೇಕು. ಅದು ಸಾಧ್ಯವಿಲ್ಲದಿದ್ದರೆ ಇಂದಿನ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಹೆಚ್ಚಿನ ಪರಿಹಾರ ನೀಡಬೇಕು” ಎಂದು ರೈತರು ಒತ್ತಾಯಿಸಿದರು.


ಹೋರಾಟಗಾರರ ಆಕ್ರೋಶ


“ರೈತರಿಂದ ಕಡಿಮೆ ದರಕ್ಕೆ ಜಮೀನು ಪಡೆದು, ಬಳಿಕ ದೊಡ್ಡ ಕಂಪನಿಗಳಿಗೆ ಲಾಭದಾಯಕ ದರದಲ್ಲಿ ನೀಡುವುದು ಅನ್ಯಾಯ. ಸರ್ಕಾರ ಮತ್ತು ಕೆಐಎಡಿಬಿ ರೈತರ ಭಾವನೆಗಳನ್ನು ನಿರ್ಲಕ್ಷಿಸುತ್ತಿವೆ” ಎಂದು ಹೋರಾಟ ಸಮಿತಿಯ ಮುಖಂಡರು ಆರೋಪಿಸಿದರು.


ಹೋರಾಟ ಸಮಿತಿಯ ಪ್ರಮುಖರಾದ ಯು. ಬಸವರಾಜ್, ಜೆ. ಸತ್ಯಬಾಬು, ಜಂಗ್ಲಿ ಸಾಬ್, ತಿಪ್ಪೆಸ್ವಾಮಿ ಸೇರಿದಂತೆ ಹಲವು ರೈತರನ್ನು ಪೊಲೀಸರು ವಶಕ್ಕೆ ಪಡೆದರು. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೂರಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತಿಗೆ ನಿಯೋಜಿಸಲಾಗಿತ್ತು.


ಸ್ಥಳದಲ್ಲಿ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್


ಪ್ರತಿಭಟನೆ ಹಿನ್ನೆಲೆಯಲ್ಲಿ ಕುಡುತಿನಿ–ತೋರಣಗಲ್ಲು ಭಾಗದಲ್ಲಿ ಬೆಳಗ್ಗಿನಿಂದಲೇ ಪೊಲೀಸ್ ವಾಹನಗಳ ಸಂಚಾರ ಹೆಚ್ಚಾಗಿತ್ತು. ಬೈಪಾಸ್ ರಸ್ತೆ ಸೇರಿದಂತೆ ಜಮೀನಿನತ್ತ ಹೋಗುವ ಪ್ರಮುಖ ಮಾರ್ಗಗಳಲ್ಲಿ ತಡೆಗೋಡೆಗಳನ್ನು ಅಳವಡಿಸಲಾಗಿತ್ತು. ರೈತರು ಜಮೀನಿನೊಳಗೆ ಪ್ರವೇಶಿಸದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡರು.


ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು. ಬಳಿಕ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.